ಬ್ಲ್ಯಾಕ್, ಜೋಸೆಫ್
	1728-99. ಸ್ಕಾಟ್ಲೆಂಡಿನ ರಸಾಯನವಿಜ್ಞಾನಿ; ಜನನ 16.4.1728 ಫ್ರಾನ್ಸ್ ದೇಶದಲ್ಲಿ. 1746ರಲ್ಲಿ ಗ್ಲಾಸ್ಗೊಗೆ ಬಂದ ಬ್ಲ್ಯಾಕ್ ಅಲ್ಲಿ ಮತ್ತು ಎಡಿನ್‍ಬರೊ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ ಪದವೀಧರರನಾಗಿ ಅಲ್ಲೆ ಪ್ರಾಧ್ಯಾಪಕನಾದ. ಉತ್ತಮ ಅಧ್ಯಾಪಕನೆಂದು ಹೆಸರುಗಳಿಸಿದ. ಮೂತ್ರಕೋಶದಲ್ಲಿ ಸಂಗ್ರಹವಾಗುವ ಹರಳುಗಳ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ಚಿಂತಿಸತೊಡಗಿದ. ಅವನ್ನು ಕರಗಿಸುವ ದ್ರಾವಕವೊಂದನ್ನು ಪತ್ತೆಹಚ್ಚಬೇಕು. ಆದರೆ ಅದು ಕೋಶದ ಅಂಗವಸ್ತುವನ್ನು ಗಾಸಿ ಮಾಡಬಾರದು. ಈ ನಿಟ್ಟಿನಲ್ಲಿ ಪ್ರಯೋಗ ಮಾಡುತ್ತಿದ್ದಾಗ ಕಾರ್ಬನ್ ಡೈಆಕ್ಸೈಡಿನ ಗುಣಗಳ ಪರಿಚಯವಾಯಿತು.

	ಸುಣ್ಣಕಲ್ಲು ರಾಸಾಯನಿಕವಾಗಿ ಕ್ಯಾಲ್ಸಿಯಮ್ ಕಾರ್ಬೊನೇಟ್. ಅದನ್ನು ಸುಟ್ಟಾಗ ಉಂಟಾಗುವ ಸುಣ್ಣ ಕ್ಯಾಲ್ಯಿಯಮ್ ಆಕ್ಸೈಡ್. ಆಗ ಒಂದು ಅನಿಲ ಬಿಡುಗಡೆಯಾಗುವುದೆಂದೂ ಅದು ಕ್ಯಾಲ್ಸಿಯಮ್ ಆಕ್ಸೈಡಿನೊಂದಿಗೆ ಕಲೆತು ಕ್ಯಾಲ್ಸಿಯಮ್ ಕಾರ್ಬೊನೇಟನ್ನು ಕೊಡಬಲ್ಲದೆಂದೂ ತೋರಿಸಿದ. ಬ್ಲ್ಯಾಕ್ ಅದನ್ನು ಬಂಧಿತ ವಾಯು ಎಂದು ಕರೆದ. ಏಕೆಂದರೆ ಅದು ಪುನಃ ಘನರೂಪದಲ್ಲಿ ಬಂಧಿಯಾಯಿತಷ್ಟೆ.

	ಕಾರ್ಬನ್ ಡೈ ಆಕ್ಸೈಡನ್ನು ಸುಮಾರು ನೂರಿಪ್ಪತ್ತೈದು ವರ್ಷಗಳ ಹಿಂದೆಯೇ ಹೆಲ್ಮಾಂಟ್ ಶೋಧಿಸಿದ್ದ. ಆದರೆ ಕಾರ್ಬೊನೇಟ್ ಖನಿಜಗಳಿಂದ ಅದನ್ನು ಪಡೆಯಬಹುದು. ದಹನ ಕಾಲದಲ್ಲಿ ಅದು ಬಿಡುಗಡೆಯಾಗುವುದುಂಟು. ಹುದುಗುಕ್ರಿಯೆ (ಫರ್ಮೆಂಟೇಷನ್) ನಡೆದಾಗಲೂ ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯಾಗುವುದು ಎಂದು ತೋರಿಸಿದಾತ ಬ್ಲಾಕ್, ಸುಟ್ಟ ಸುಣ್ಣವನ್ನು (ಕ್ಯಾಲ್ಸಿಯಮ್ ಆಕ್ಸೈಡ್) ವಾಯುವಿಗೆ ತೆರೆದಿಟ್ಟಾಗ ಅದು ಕ್ಯಾಲ್ಸಿಯಮ್ ಕಾರ್ಬೊನೇಟ್ ಆಗುತ್ತಿತ್ತು. ಆದ್ದರಿಂದ ವಾಯುವಿನಲ್ಲಿ ಕಾರ್ಬನ್ ಡೈ ಆಕ್ಸೈಡ್ ಇರಲೇಬೇಕೆಂದು ಅವನು ತರ್ಕಿಸಿದ. ಈ ಅನಿಲವನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ ದ್ರಾವಣ ಹಾಲಿನಂತೆ ಬೆಳ್ಳಗಾಯಿತು. ಸುಣ್ಣದ ತಿಳಿಯಲ್ಲಿ ಕೊಳವೆ ಇಟ್ಟು ಬಾಯಿಯಿಂದ ಊದಿದಾಗಲೂ ಹೀಗೆಯೇ ಆಯಿತು. ಆದ್ದರಿಂದ ನಾವು ನಿಶ್ವಸಿಸುವ ವಾಯುವಿನಲ್ಲೂ ಕಾರ್ಬನ್ ಡೈ ಆಕ್ಸೈಡ್ ಇದೆಯೆಂದು ಗೊತ್ತಾಯಿತು.

	ಉರಿಯತ್ತಿರುವ ಮೋಂಬತ್ತಿಯನ್ನು ಇಟ್ಟಾಗ ಕಾರ್ಬನ್ ಡೈ ಆಕ್ಸೈಡಿರುವ ಪಾತ್ರೆಯಲ್ಲಿ ಅದು ನಂದಿ ಹೋಯಿತು. ಮುಚ್ಚಿದ ಪಾತ್ರೆಯಲ್ಲಿಟ್ಟ ಮೋಂಬತ್ತಿಯೂ ಹೀಗೆಯೇ ಕ್ರಮೇಣ ಆರಿ ಹೋಯಿತು. ಮೋಂಬತ್ತಿಯಲ್ಲಿದ್ದ ಕಾರ್ಬನ್ ವಾಯುವಿನಲ್ಲಿದ್ದ ಆಕ್ಸಿಜನ್ನನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಉತ್ಪತ್ತಿಮಾಡಿತ್ತು. ಅದನ್ನು ಯುಕ್ತರಾಸಾಯನಿಕಗಳಿಂದ ಹೀರಿಹಾಕಿದಾಗ ಪಾತ್ರೆಯಲ್ಲಿ ಉಳಿದ ವಾಯು ಕೂಡ ದಹನಾನುಕೂಲಿಯಾಗಿರಲಿಲ್ಲ. ಈ ಸಮಸ್ಯೆಯನ್ನು ಅವನ ಶಿಷ್ಯ ಡ್ಯಾನಿಯಲ್ ರುಧರ್‍ಫರ್ಡ್ ಬಿಡಿಸಿ ಅದು ನೈಟ್ರೊಜನ್ ಎಂಬ ಬೇರೊಂದು ಅನಿಲವೆಂದು ತೋರಿಸಿದ. ಬ್ಲ್ಯಾಕನ ಈ ಸಾಧನೆ ಇತರ ಅನಿಲಗಳ ಶೋಧಕ್ಕೆ ದಾರಿಮಾಡಿತು. ಮುಂದೆ ಕ್ಯಾವೆಂಡಿಷ್‍ನಿಂದ ಹೈಡ್ರೊಜನ್ (1766). ರುದರ್‍ಫರ್ಡ್‍ನಿಂದ ನೈಟ್ರೊಜನ್ (1772), ಷೀಲೆಯಿಂದ ಕ್ಲೋರೀನ್ (1774) ಮತ್ತು ಪ್ರೀಸ್ಟ್ಲಿಯಿಂದ ಆಕ್ಸಿಜನ್ ಆವಿಷ್ಕರಿಸಲ್ಪಟ್ಟವು.

	ಕ್ಯಾಲ್ಸಿಯಮ್ ಕಾರ್ಬೊನೇಟನ್ನು ಕಾಸಿದಾಗ ಉಂಟಾದ ತೂಕ ನಷ್ಟವನ್ನೂ ನಿರ್ದಿಷ್ಟ ಪರಿಮಾಣದ ಆಮ್ಲವನ್ನು ತಟಸ್ಥೀಕರಿಸಲು ಬೇಕಾಗುವ ಕ್ಯಾಲ್ಸಿಯಮ್ ಕಾರ್ಬೊನೇಟಿನ ತೂಕವನ್ನು ಬ್ಲ್ಯಾಕ್ ನಿರ್ಣಯಿಸಿದ. ಹಲವು ದಶಕಗಳ ತರುವಾಯ ಲೇವಾಸ್ಯೇ ಈ ಪರಿಮಾಣಾತ್ಮಕ ವಿಶ್ಲೇಷಣ ತಂತ್ರವನ್ನೇ ಸುಧಾರಿಸಿ ಎಲ್ಲ ರಾಸಾಯನಿಕ ಕ್ರಿಯೆಗಳಿಗೂ ಅದನ್ನು ಅನ್ವಯಿಸಬಹುದೆಂದು ತೋರಿಸಿದ.

	ಭೌತವಿಜ್ಞಾನದಲ್ಲಿ ಬ್ಲ್ಯಾಕನ ಪ್ರಯೋಗಗಳು ಕ್ರಾಂತಿಕಾರಿಯಾಗಿದ್ದವು. ಉಷ್ಣದ ಪರಿಮಾಣಕ್ಕೂ ಪ್ರಬಲತೆಗೂ ಇರುವ ವ್ಯತ್ಯಾಸಶ್ರುತಪಡಿಸಿದವರಲ್ಲಿ ಬ್ಲ್ಯಾಕ್ ಮೊದಲಿಗ. ಪ್ರಬಲತೆಯ ಮಟ್ಟವೇ ಉಷ್ಣತೆ. ಬರ್ಫವನ್ನು ಕಾಸಿದಾಗ ಅದು ಕ್ರಮೇಣ ಕರಗುತ್ತದೆ. ಅದರ ಉಷ್ಣತೆಯಲ್ಲಿ ವ್ಯತ್ಯಾಸವಾಗದು. ಆದರೆ ಬರ್ಫಉಷ್ಣವನ್ನು ಹೀರಿಕೊಂಡಿರುವುದು ನಿಜ. ಅದರಲ್ಲಿರುವ ಉಷ್ಣವನ್ನು ಗುಪ್ತೋಷ್ಣ ಎಂದು ಕರೆಯಲಾಯಿತು. ನೀರು ಕುದಿದು ಹಬೆಯಾದಾಗಲೂ ನೀರಿನ ಉಷ್ಣತೆ ಸ್ಥಿರವಾಗಿರುತ್ತಿತ್ತು. ಈ ಅನುಭವವನ್ನು ಆಧರಿಸಿ ಬ್ಲ್ಯಾಕ್ ಗುಪ್ತೋಷ್ಣ ತತ್ತ್ವ ನಿರೂಪಿಸಿದ. ಘನ ಸ್ಥಿತಿಯಿಂದ ದ್ರವರೂಪಕ್ಕೆ ಮತ್ತು ದ್ರವ ಸ್ಥಿತಿಯಿಂದ ಅನಿಲಸ್ಥಿತಿಗೆ ವಸ್ತು ಪರಿವರ್ತನೆ ಹೊಂದಿದಾಗ ಉಷ್ಣ ಗೋಪ್ಯವಾಗಿ ವೆಚ್ಚವಾಗುತ್ತದೆ. ಆದ್ದರಿಂದ ಅದು ನಮ್ಮ ಕೈಗೆ ಅಥವಾ ಉಷ್ಣತಾಮಾನಕ್ಕೆ ತಟ್ಟದು. ನೂತನ ಸ್ಥಿತಿಯಲ್ಲಿರುವ ತನಕ ಈ ಉಷ್ಣ ವಸ್ತುವಿನಲ್ಲಿ ಅಡಗಿರುತ್ತದೆ. ಅದು ಪೂರ್ವ ಸ್ಥಿತಿಗೆ ಮರಳಿದಾಗ ಗುಪ್ತೋಷ್ಣವನ್ನು ಹೊರಗೆಡವುತ್ತದೆ ಎಂಬುದು ಅದರ ಸಾರಾಂಶ. ಹಬೆ ನೀರಿನ ರೂಪ ತಳೆದಾಗ ಬಿಡುಗಡೆಯಾಗುವ ಉಷ್ಣದ ಪರಿಮಾಣ. ನೀರುಹಬೆಯಾದಾಗ ಹೀರಿಕೊಳ್ಳುವ ಉಷ್ಣದ ಪರಿಮಾಣಕ್ಕೆ ಸಮವಾಗಿತ್ತು. (1 ಗ್ರಾಮ್‍ಗೆ ಸುಮಾರು 540 ಕೆಲೊರಿಗಳು). ಅಂತೆಯೇ 1 ಗ್ರಾಮ್ ನೀರು ಬರ್ಫವಾದಾಗ ಸುಮಾರು 80 ಕೆಲೊರಿಗಳಷ್ಟು ಉಷ್ಣ ಹೀರಲ್ಪಟ್ಟರೆ, ಅದು 1 ಗ್ರಾಮ್ ಬರ್ಫ ಕರಗಿ ನೀರಾದಾಗ ಅಷ್ಟೇ ಪರಿಮಾಣದ ಉಷ್ಣ ಹೊರಬೀಳುವುದೇ ವ್ಯಕ್ತವಾಯಿತು. ಉಷ್ಣವೂ ಶಕ್ತಿಯ ಒಂದು ರೂಪವಷ್ಟೆ. ಸುಮಾರು 75 ವರ್ಷಗಳ ತರುವಾಯ ಈ ಫಲಿತಾಂಶವನ್ನೇ ವಿಸ್ತರಿಸಿ ಮೇಯರ್. ಜೌಲ್ ಮತ್ತು ಹೆಲ್ಮ್ ಹೋಲ್ಟ್ಸ್ ಎಂಬುವರು ಶಕ್ತಿ ನಿತ್ಯತ್ವ ನಿಯಮ ನಿರೂಪಿಸಿದರು. ಕುದಿಯುವ ನೀರಿಗಿಂತ ಅಷ್ಟೇ ತೂಕದ ಹಬೆ ಹೆಚ್ಚು ಉಷ್ಣ ಮೈಗೂಡಿಸಿಕೊಂಡಿರುವುದೆಂಬುದು ಮೇಲೆ ತಿಳಿಸಿದ ಪ್ರಯೋಗಗಳಿಂದ ವಿದಿತ. ಇದನ್ನರಿತ ಜೇಮ್ಸ್ ವ್ಯಾಟ್ ಹಬೆ ಎಂಜಿನ್ ನಿರ್ಮಿಸಿದ.

	ಗ್ರಾಹ್ಯೋಷ್ಣ ತತ್ತ್ವ ಬ್ಲ್ಯಾಕನ ಇನ್ನೊಂದು ಪ್ರಮುಖ ಶೋಧನೆ. ಇದನ್ನು ಅವನು ಪದಾರ್ಥಗಳ ಉಷ್ಣಧಾರಣ ಸಾಮಥ್ರ್ಯ ಎಂದು ಬಣ್ಣಿಸಿದ. ಗೊತ್ತಾದ ತೂಕದ ಬೇರೆ ಬೇರೆ ಪದಾರ್ಥಗಳನ್ನು ತೆಗೆದುಕೊಂಡು ಕಾಸಿದರೆ ಅವು ಹೀರಿಕೊಳ್ಳುವ ಉಷ್ಣದ ಪರಿಮಾಣದಲ್ಲಿ ವ್ಯತ್ಯಾಸವಿರುವುದು. ಗೊತ್ತಾದ ಒಂದು ಉಷ್ಣತೆಯಿಂದ ಗೊತ್ತಾದ ಇನ್ನೊಂದು ಉಷ್ಣತೆಗೆ ಅವನ್ನು ಏರಿಸಲು ಬೇಕಾದ ಉಷ್ಣದ ಪರಿಮಾಣ ಭಿನ್ನವಾಗಿರುತ್ತದೆ. ಇದೇ ಆ ತತ್ತ್ವ. ನಿದರ್ಶನವಾಗಿ 1500ಅ ಉಷ್ಣತೆಯಲ್ಲಿರುವ ಒಂದು ಕೆಜಿ ಚಿನ್ನವನ್ನು 500 ಆ ಉಷ್ಣತೆಯಲ್ಲಿರುವ ಒಂದು ಕೆಜಿ ನೀರಿಗೆ ಹಾಕಿದಾಗ ಮಿಶ್ರಣದ ಉಷ್ಣತೆ ಸರಾಸರಿ 1000ಅ ಆಗಲಿಲ್ಲ. 550ಅ ಉಷ್ಣವನ್ನು ತಲಪಿತು. ಚಿನ್ನ 950ಅ ಉಷ್ಣ ಕಳೆದುಕೊಂಡರೆ ನೀರು 50ಅ ಉಷ್ಣ ಹೀರಿಕೊಂಡಿತು. ನೀರಿನ ಉಷ್ಣಗ್ರಹಣ ಸಾಮಥ್ರ್ಯ ಚಿನ್ನದ ಉಷ್ಣಗ್ರಹಣ ಸಾಮಥ್ರ್ಯಕ್ಕಿಂತ 19 ಪಟ್ಟು ಹೆಚ್ಚಾಗಿರುವುದೇ ಇದಕ್ಕೆ ಕಾರಣವೆಂದು ಬ್ಲ್ಯಾಕ್ ತರ್ಕಿಸಿದ. ಇದು ನಿಜವಾಗಿದ್ದರೆ ನಿರ್ದಿಷ್ಟ ತೂಕ ಪಾದರಸವನ್ನು ನಿರ್ದಿಷ್ಟ ಉಷ್ಣತೆಗೆ ಏರಿಸಲು ಬೇಕಾಗುವ ಉಷ್ಣಮಾಣಕ್ಕೂ ಅಷ್ಟೇ ತೂಕ ನೀರನ್ನು ಅದೇ ಉಷ್ಣತೆಗೆ ತರಲು ಬೇಕಾಗುವ ಉಷ್ಣಪರಿಮಾಣಕ್ಕೂ ವ್ಯತ್ಯಾಸವಿರಬೇಕು. ಇದೂ ಕೂಡ ಪ್ರಯೋಗದಿಂದ ದೃಢಪಟ್ಟಿತು.

	ಕ್ಯಾವೆಂಡಿಷ್ ಹೈಡ್ರೊಜನ್ ಅನಿಲದ ಮೇಲೆಯೂ ಪ್ರೀಸ್ಟ್ಲಿ ಮತ್ತು ಷೀಲೆ ಆಕ್ಸಿಜನ್ ಅನಿಲದ ಮೇಲೆಯೂ ನಡೆಸಿದ ಪ್ರಯೋಗಗಳನ್ನು ಅವಲಂಬಿಸಿ ದಹನಕ್ರಿಯೆ ಮತ್ತು ಪ್ರಾಣಿಗಳ ಶ್ವಾಸಕ್ರಿಯೆಗಳ ಬಗ್ಗೆ ಲೆವಾಸ್ಸೇ ತನ್ನ ಸಿದ್ಧಾಂತ ಪ್ರತಿಪಾದಿಸಿದನಷ್ಟೆ. ಇದಕ್ಕೆ ಬ್ಲ್ಯಾಕನ ಗುಪ್ತೋಷ್ಣ ಮತ್ತು ಗ್ರಾಹ್ಯೋಷ್ಣ ತತ್ತ್ವಗಳೇ ಆಧಾರವಾಗಿರುವುವು. ಹೀಗೆ ಆಧುನಿಕ ರಸಾಯನವಿಜ್ಞಾನಕ್ಕೆ ಎರಡು ಊರುಗಂಬ ಒದಗಿಸಿದ ಕೀರ್ತಿ ಬ್ಲ್ಯಾಕನದು. ಅದರಲ್ಲೂ ಆ ಅಡಿಗಲ್ಲುಗಳ ಮೇಲೆ ರಸಾಯನವಿಜ್ಞಾನದ ಭವ್ಯ ಕಟ್ಟಡ ಏರಬಹುದೆಂಬ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲಿ ಅವನ್ನು ಸ್ಥಾಪಿಸಿದ್ದು ಬ್ಲ್ಯಾಕನ ಹೆಚ್ಚಳ.

	ಸುಮಾರು 40 ವರ್ಷಗಳ ಕಾಲ ಉಪಾಧ್ಯಾಯನಾಗಿ ಈತ ಸೇವೆ ಸಲ್ಲಿಸಿದ ರೀತಿ ಶ್ಲಾಘನೀಯವಾದುದು. ಈತನ ಪ್ರವಚನ ಪದ್ಧತಿ ಆದರ್ಶವಾಗಿದ್ದುದಲ್ಲದೆ ವೈಜ್ಞಾನಿಕ ಉಪನ್ಯಾಸಗಳಿಗೆ ಅಗತ್ಯವಾದ ಸರಳ ಶೈಲಿಯಲ್ಲಿಯೂ ಇರುತ್ತಿತ್ತು. ಆಡಿ ಮಾಡಿ ತೋರಿದುದರಲ್ಲಿ ಸೊಬಗಿರುತ್ತಿತ್ತು. ಶ್ರೋತೃಗಳ ಗಮನ ಸೆಳೆಯಬೇಕು. ಚರ್ಚಿತ ವಿಷಯ ಅವರ ನೆನೆಪಿನಲ್ಲಿ ಉಳಿಯಬೇಕು. ಸಿದ್ಧಾಂತಕ್ಕೂ ಫಲಿತಾಂಶಕ್ಕೂ ನಡುವೆ ಇರುವ ಸಂಬಂಧ ಅವರಿಗೆ ಮನವರಿಕೆಯಾಗಬೇಕು. ಸಿದ್ಧಾಂತದ ಮೂಲ ಕರ್ತೃ ಅದನ್ನು ಶೋಧಿಸಿದ ಬಗ್ಗೆ ರಂಜನೀಯ ವಿಶ್ಲೇಷಣೆ ಇರಬೇಕು. ಹೀಗಿದ್ದರೆ ಮಾತ್ರ ಪ್ರವಚನ ಸಾರ್ಥಕ ಎಂದು ಬ್ಲ್ಯಾಕ್ ಭಾವಿಸಿದ್ದ. 	
			(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ